ಅಳುಗುಳಿ ಮಣೆ

ಆಡುವುದು ಹೇಗೆ?

ಪೀಠಿಕೆ

ಅಳುಗುಳಿಮನೆ ಅಂತಾ ಓದಿದ ತಕ್ಷಣ ಖಂಡಿತ ನಿಮೆಲ್ಲರ ಸವಿ ಸವಿ ನೆನಪುಗಳು, ಅಜ್ಜಿ, ಅಮ್ಮಮ್ಮ, ಪಾಟಿ, ಅಚ್ಚಮ್ಮ, ನಾನಿ, ಅಮ್ಮನ ಜೊತೆ ಆಟ ಆಡಿದ ಕ್ಷಣಗಳು ಉಕ್ಕರಿಸಿ ಬರುತ್ತಿದೆ ಅಲ್ವಾ! ಇದು ನಮ್ಮ ಪ್ರಾಚೀನ ಭಾರತದ ಅಬಾಕಸ್ ಅಂದ್ರೆ ತಪ್ಪೇನಿಲ್ಲ. ದಕ್ಷಿಣ ಭಾರತದಲ್ಲಿ ಹಾಸು ಹೊಕ್ಕಾದ, ನಮ್ಮೆಲ್ಲರ ಬಾಲ್ಯದ ನೆನಪುಗಳಲ್ಲಿ ಒಂದಾದ ಅಳುಗುಳಿಮನೆ ಆಟದ ಬಗ್ಗೆ ಒಂದು ಕಿರು ಪರಿಚಯ.

ಈ ಮಣೆಯು ಮರ, ಹಿತ್ತಾಳೆ, ಕಲ್ಲುಗಳಲ್ಲಿ ಕೆತ್ತಿರುವುದು ನೋಡಬಹುದು. ಏನು ಇಲ್ಲದಿದ್ದರೂ ನೆಲದ ಮೇಲೆ ವೃತ್ತ ಬರೆದು ಆಡಬಹುದು. ಮಣೆಯ ಗುಂಡಿಗಳಿಗೆ ಗುಂತಲು, ಕುಳಿ, ಗೋಟು,ಗುಣಿ , ಹಳ್ಳ ಎನ್ನುವುದುಂಟು. ನದಿಯ ತಟದ ಬಂಡೆಗಳಲ್ಲಿ ಸಹ ನೋಡಬಹುದು. 

ಅಳುಗುಳಿ ಮಣೆ  ಆಟವನ್ನ ಚನ್ನೇ ಮಣೆ, ಚನ್ನ ಮಣೆ, ಅಳುಗುಳಿಮಣೆ, ಗುಳಿ ಮನೆ, ಗೋಟಿ ಮಣೆ , ಹರಳು ಮಣೆ, ಹರಳು ಮನೆ, ಹಳಗುಣಿ ಮಣೆ , ಹಳ್ಳಗುಳ್ಳಿ ಮನೆ, ಪತ್ತ ಮಣೆ, ಕುಡ್ಗೊಳ್ ಮಣಿ ಅಂತೆಲ್ಲ ಕರ್ನಾಟಕದಲ್ಲಿ ಕರೆಯುವುದು.

ಆಂಧ್ರದಲ್ಲಿ – వాన-గుంతల పీట, వామన గుంటలు, ವಾಮನ ಗುಂತಲು, ವಾನಗಲ್ಲ ಪೀಠ, ವಾಮನ ಗುಂಟ ಪೀಠ,

ಕೊಂಕಣಿ ಪ್ರದೇಶದಲ್ಲಿ ಗುರಪಾಲೆ , ಗುರ್ಪಲೆ 

ತಮಿಳ್ ನಾಡಿನಲ್ಲಿ பல்லாங்குழி  ಪಲ್ಲಂಕುಜ್ಹಿ, ಪಲ್ಲಂಗುಜ್ಹಿ  

ಕೇರಳದಲ್ಲಿ പല്ലാങ്കുഴി

ರಾಯಲಸೀಮೆ ಪ್ರದೇಶದಲ್ಲಿ ಗೋಟುಗುಣಿ ಆಟ,

ಕರ್ನಾಟಕದಲ್ಲಿ, ತಮಿಳುನಾಡಿನಲ್ಲಿ ಒಂದು ಬದಿಗೆ ೭ ಗುಣಿ ಒಟ್ಟು ೧೪ ಗುಣಿಗಳಿರುವ ಮಣೆಯನ್ನು ಸಾಮಾನ್ಯವಾಗಿ ಕಾಣಬಹುದು. ಆಂಧ್ರದಲ್ಲಿ ಒಂದು ಬದಿಗೆ ೫ ಮತ್ತು ೭ ಗುಣಿ ಒಟ್ಟು ೧೦ ಮತ್ತು ೧೪ ಗುಣಿಗಳಿರುವ ಚನ್ನೆಮಣೆಯ ಮಣೆಯನ್ನು ಸಾಮಾನ್ಯವಾಗಿ ಕಾಣಬಹುದು. ನದಿಯ ತಟದಲ್ಲಿ, ಬಂಡೆಯ ಮೇಲೆ, ಐತಿಹಾಸಿಕ ಸ್ಥಳಗಳಲ್ಲಿ, ದೇವಾಲಯದ ಪ್ರಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಳಿಗಳು ಇರುವುದು ಸಹ ಕಾಣಬಹುದು. ಗುಳಿಗಳು ಬೆಸ ಸಂಖ್ಯೆಯಲ್ಲಿ ಅಂದರೆ, ೯-೧೧-೧೫-೨೧ ಗುಣಿಗಳಲ್ಲಿ ಇರುತ್ತದೆ.  ಹಾಗೆಯೇ ಇದಕ್ಕೆ ಉಪಯೋಗಿಸುವ ಕಾಯಿಗಳು ಸಹ ವಿಧ ವಿಧ i.e. ಕವಡೆ, ಚನ್ನೇ ಕಾಯಿ, ಹೊಂಗೆ ಮರದ ಬೀಜ, ಗುಲಗಂಜಿ, ಮಂಜೊಟ್ಟಿ , ಮಂಜಾಡಿ, ಹುಣಸೆಬೀಜ, ಹುರಳಿಕಾಳು ಇತ್ಯಾದಿ. ಏನು ಇಲ್ಲವೇ, ಕಡಲೆಬೀಜ/ ಶೇಂಗಾಬೀಜ ಸಹ ಉಪಯೋಗಿಸಬಹುದು. ಆಟದಲ್ಲಿ ಗೆದ್ದವರಿಗೆ ಬೀಜ ಅಂತ ಪಣ ಕೂಡ ಇರುತ್ತಿತ್ತು.

ಇನ್ನು ಆಟಗಳ ಹೆಸರು, ಪ್ರಕಾರವಂತೂ ಒಂದಕ್ಕಿಂತ ಒಂದು ರೋಚಕ. ಕಾಯಿಗಳನ್ನು ಎತ್ತುವ ಮನೆ, ಬಿಡುವ ಪ್ರಕಾರದಲ್ಲಿ, ಬಾಚಿಕೊಳ್ಳುವ ಮನೆ ರೀತಿಯಲ್ಲಿ ಬೇರೆ ಬೇರೆ ಆಟದ ಪ್ರಕಾರವಿದೆ. ಸುಮಾರು ೨೦ಕ್ಕಿಂತ ಹೆಚ್ಚು ಆಟಗಳು ಇದೆ. ಸಾದಾ ಆಟ, ಪತ್ತದ ಆಟ, ಜೋಡಿ ಪತ್ತದ್ ಆಟ, ಕರು ಹಾಕುವ/ ತೆಗೆದುಕೊಳ್ಳುವ ಆಟ, ಸೀತೆ ಆಟ, ಅರಸನ ಆಟ, ಅರಸ-ಒಕ್ಕಲು ಆಟ, ಕಟ್ಟೆ ಮನೆ ಆಟ, ಮೂಲೆ ಮನೆ ಆಟ ಇತ್ಯಾದಿ. ಒಬ್ಬರೇ ಆಡುವುದಾದರೆ ಸೀತೆ ಆಟ, ಎಂದೂ ಮುಗಿಯದ ಆಟಗಳಿವೆ. ಇಬ್ಬರು ಆಡುವುದಾದರೆ ಸಾದಾ ಆಟ, ಹೆಗ್ಗೆ ಆಟ, ತಿಂಬಾಟ, ಮೂಲೆಮನೆ ಆಟ ಇತ್ಯಾದಿ. ೩ ಜನ ಆಡುವುದಾದರೆ ಅರಸ-ಒಕ್ಕಲು / ಅರಸ-ಮಂತ್ರಿ-ಜನರ ಆಟ. 

ಇದರಲ್ಲಿ ಉಪಯೋಗಿಸುವ ನುಡಿಗಟ್ಟುಗಳು ಸಹ ಅಷ್ಟೇ ವೈವಿಧ್ಯಮಯ.. ದತ್ತ ಸರಿ ಇರಬೇಕು, ಪತ್ತ ತೆಗೆದುಕೊಳ್ಳುವುದು, ಕರು ಹಾಕುವುದು, ಹೆಗ್ಗಣ ಆದ ಗೋಣಿ, ಬೀಜ ಬಿತ್ತಿ, ಬೆಳೆ ತೆಗೆದುಕೊಳ್ಳುವುದು, ಹರಳು ಹಾಕಿ ತೆಗೆದುಕೊಳ್ಳುವುದು, ಪೋಕಿಣಿ ಮಾಡುವುದು, ಸರ್ಮನೆ ಆಗುವುದು, ಕರು ಕೊಳೆಯುವುದು.

ಅಳುಗುಳಿಮನೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮಕ್ಕಳಿಗೆ ಕೂಡುವ, ಕಳೆಯುವ, ಗುಣಿಸುವ ಮತ್ತು ಭಾಗಿಸುವ ಪರಿಕಲ್ಪನೆಯನ್ನು ಚೆನ್ನಾಗಿ ಮನದಟ್ಟು ಮಾಡಿಸಬಹುದು. ಅದಕ್ಕೆ ನಮ್ಮ ಹಿಂದಿನವರು ಮಿದುಳಿನಲ್ಲಿ ಲೆಕ್ಕ ಮಾಡುವುದರಲ್ಲಿ ಚುರುಕಿದ್ದರು.

ಪದಗಳ ಸಮಾನಾರ್ಥ:

ಮಣೆ – ೫-೭ ಗುಳಿಗಳಿರುವ ಆಟಿಕೆಯ ವಸ್ತು. ಇದು ಮರ, ಹಿತ್ತಾಳೆ, ಕಲ್ಲಿನದು ಆಗಿರಬಹುದು. ಎರಡು ಬದಿಯಲ್ಲಿ ೭ ರಂತೆ , ಒಟ್ಟು ೧೪ ಗುಳಿಗಳು ಇರುತ್ತದೆ.

ಹೆಗ್ಗ – ಹರಳು ಗುಳಿಯ ಆಟದಲ್ಲಿ ಹೆಚ್ಚು ಹರಳುಗಳಿಂದ ತುಂಬಿದ ಗುಳಿ. 

ಗುಳಿ – ಗುಂಡಿಗಳಿಗೆ ಇರುವ ಪ್ರಾದೇಶಿಕ ಹೆಸರುಗಳು. ಗುಂತಲು, ಕುಳಿ, ಗೋಟು,ಗುಣಿ , ಹಳ್ಳ  

ಪೆಗ್ಗ – ಪೆರ್ಗ ಅಂತಲೂ ಕರೆಯುತ್ತಾರೆ. ಸಂಗ್ರಹ ವಾದ ಗುಳಿಯ ಕಾಯಿಗಳು. 

ಕರು – ಆಟ ಆಡಲು ಶುರು ಮಾಡಿದ ಮೇಲೆ ಯಾವ ಗುಳಿಯಲ್ಲಿ ೪ ಕಾಯಿಗಳು ಒಟ್ಟಾದಾಗ ಕರು ಎನ್ನುತ್ತೇವೆ. ಪಶು ಎಂದು ಆಂಧ್ರ ಕಡೆ, ಪಸು ಎಂದು ತಮಿಳ್ನಾಡಿನ ಕಡೆಗೆ ಕರೆಯುತ್ತಾರೆ. ಆಟವನ್ನು  ೪ ಕಾಯಿಗಳಿಂದ ಆಡಿದ್ದರೇ, ೪ ಕಾಯಿಗಳು ಒಟ್ಟಾದಾಗ ಕರು ಬಂದಿರುತ್ತೆ. ಆಟವನ್ನು  ೫ ಕಾಯಿಗಳಿಂದ ಆಡಿದ್ದರೇ, ೪ ಕಾಯಿಗಳು ಒಟ್ಟಾದಾಗ ಕರು ಬಂದಿರುತ್ತೆ. ಆಟವನ್ನು  ೬ ಕಾಯಿಗಳಿಂದ ಆಡಿದ್ದರೇ, ೬ ಕಾಯಿಗಳು ಒಟ್ಟಾದಾಗ ಕರು ಹಾಕುತ್ತದೆ.

ಸಾದಾ ಆಟ 

ಈ ಆಟವನ್ನು ಉತ್ತರ ಕರ್ನಾಟಕದಲ್ಲಿ ೪ ಕಾಯಿಗಳೊಂದಿಗೆ, ಮೈಸೂರು, ದಕ್ಷಿಣ ಕನ್ನಡ ಮತ್ತು ಕರಾವಳಿ ಪ್ರದೇಶದಲ್ಲಿ ೫ ಕಾಯಿಗಳೊಂದಿಗೆ, ತಮಿಳ್ನಾಡು ಆಂಧ್ರದ ಕಡೆ ೬ ಕಾಯಿಗಳೊಂದಿಗೆ ಆಡುವುದು ಬಳಕೆಯಲ್ಲಿ ಇದೆ. 

ಕರು ಬಾಚುವ ಆಟ 

ಈ ಆಟವನ್ನು ಕರು ತೆಗೆದುಕೊಳ್ಳುವ, ಕರು ಬರುವ ಆಟ ಎಂದೆಲ್ಲ ಕರೆಯುತ್ತಾರೆ. ಕೆಲಕಡೆ  ಎಮ್ಮೆ ಇಯೋದು ಅಂತ ಕರೆಯುತ್ತಾರೆ.

ಹೆಗ್ಗೆ ಆಟ 

ಈ ಆಟವನ್ನು  ಹೆಗ್ಗೆ ಆಟ / ಪೆಗ್ಗದ ಆಟ ಸಹ ಕರೆಯುತ್ತಾರೆ. ಪೆಗ್ಗ ಅಂದ್ರೆ ನಿಧಿ, ರಾಶಿ ಅಂತ ತುಳು ಭಾಷೆಯಲ್ಲಿ ಹೇಳುತ್ತಾರೆ. ಆದ್ದರಿಂದ ಇಲ್ಲಿ ಕಾಯಿಗಳ ರಾಶಿಯೇ ನಮಗೆ ನಿಧಿ. ಅಂದರೆ,  ಹೆಗ್ಗೆ, ಪೆಗ್ಗ. 

ಜೋಡಿ ಹೆಗ್ಗೆ ಆಟ

ಈ ಆಟವನ್ನು  ಜೋಡಿ ಹೆಗ್ಗೆ ಆಟ/ ಜೋಡಿ ಪೆಗ್ಗದ/ ಜೋಡಿ ಪೆರ್ಗ ಆಟ/ ಜೋಡಿ ಮನೆ ಆಟ ಅಂತಲೂ ಕರೆಯುತ್ತಾರೆ. ಆಡುವ ವಿಧಾನ ಹೆಗ್ಗೆ ಆಟದಂತೆಯೇ.

ಅಜ್ಜಿ ಆಟ 

ಎಂದೂ ಮುಗಿಯದ ಆಟ, ಅಜ್ಜಿ ಮುಗ್ಗರಿಸದ ಆಟ

ಸೀತೆ ಆಟ

ಸೀತೆಯು ಲಂಕೆಯ ಅಶೋಕವನದಲ್ಲಿ ಇದ್ದಾಗ , ಬೇಸರ ಕಳೆಯಲು, ರಾಮನನ್ನು ನೆನೆಯಲು ಈ ಆಟವನ್ನು ಆಡುತಿದ್ದಳು ಅನ್ನುವ ಪ್ರತೀತಿ ಇದೆ.